Book review: Dev's Romancing with Life ( Kannada)

ದೇವ್ ಆನಂದರ ಆತ್ಮ ಚರಿತ್ರೆ: ರೊಮಾನ್ಸಿಂಗ್ ವಿತ್ ಲೈಫ಼್:
~~~~~~~~~~~~~~~~~~~~~~~~~~~~~~~
http://amzn.to/2uQ21nk


ದೇವ್ ಆನಂದ್ ಎಂದರೆ ಒಬ್ಬ ದೊಡ್ಡ ಲೆಜೆಂಡ್, ಹಿಂದಿ ಚಿತ್ರರಂಗವನ್ನು 6 ದಶಕಗಳ ತನ್ನದೇ ಆದ ಶೈಲಿಯಲ್ಲಿ ಕಾಲ ಆಳಿದ ದಿಗ್ಗಜ.
1948 ರಿಂದ 2011 ವರೆಗೂ ತಾನು ಅವಿರತವಾಗಿ ದುಡಿದು ಸುಮಾರು 114 ಚಿತ್ರಗಳಲ್ಲಿ ನಾಯಕ ನಟನಾಗಿ ಮೆರೆದ ಈತನ ಜೀವನ ಚರಿತ್ರೆ ಒಬ್ಬ ಚಿತ್ರರಂಗದ ವಿದ್ಯಾರ್ಥಿಗೆ ನಿದರ್ಶನ ಮತ್ತು ಮಾಗದರ್ಶನ ಎರಡೂ ಆಗಿರಬೇಕು...ತಮ್ಮದೇ ಹಸ್ತದಲ್ಲಿ ಅಂಕಿತಗೊಳಿಸಿ( ಗೋಸ್ಟ್ ರೈಟರ್= ಕಾಣದ ಕೈಯಲ್ಲಿ ಬರೆಸದೇ) ಪ್ರಕಟಿಸಿರುವ ಈ ಪುಸ್ತಕವನ್ನು ಬಹಳ ಆಸಕ್ತಿಯಿಂದ ಓದಿ ಮುಗಿಸಿದೆ.
ಆರು ದಶಕಗಳ ತಮ್ಮ ಅತಿ ಉದ್ದದ ಜೀವನ ಗಾಥೆಯನ್ನು ಬರೆಯುತ್ತಾ ಬರೆಯುತ್ತಾ ಹಲವಾರು ಪ್ರೇಮ, ಅನುರಾಗ, ಸೋಲು ಗೆಲುವುಗಳನ್ನು ಅನುಭವಿಸುತ್ತಾ ಬಂದ ದೇವ್ ಚರಿತ್ರೆ ಒಮ್ಮೆ ದಿಗ್ಭ್ರಮೆಯೂ, ಒಮ್ಮೊಮ್ಮೆ ಸ್ವಲ್ಪ ನಿರಾಸೆಯನ್ನೂ ಮೂಡಿಸುತ್ತಾ ಹೋಗುತ್ತದೆ..ಆದರೆ ಅದು ಅವರ ತಪ್ಪಲ್ಲ...ಅವರ ಜೀವನದ ಅನುಭವಗಳೇ ಅಷ್ಟು ವೈವಿಧ್ಯಮಯ, ರಸಮಯ.
ತಮ್ಮ ಲಾಹೋರಿನ ಬಾಲ್ಯ ಜೀವನ, ಶಾಲಾ ಕಾಲೇಜಿನ ಅನುಭವಗಳನ್ನು ನಂತರ ಮುಂಬೈಗೆ ಓಡಿ ಬಂದಿದ್ದನ್ನೂ ಮರೆಯದೇ ಕಟ್ಟಿಕೊಟ್ಟಿದ್ದಾರೆ. ಮುಂಬೈಯಲ್ಲಿ ಸರಕಾರಿ ಕಚೇರಿಯ ಕೆಲಸ, ನಾಟಕ ಪದಾರ್ಪಣ, ಮೊದಲ ಚಿತ್ರ "ಜಿದ್ದಿ"ಯ ಅನುಭವಗಳು, ನಂತರದ ಚಿತ್ರಗಳ ಸೋಲುಗಳು; ನಡುವೆ ಅವರ ಪ್ರೇಮಿ- ಪ್ರಣಯಿಗಳನ್ನೂ ನೆನೆಸಿಕೊಳ್ಳುವುದನ್ನು ಮರೆಯುವುದಿಲ್ಲ.
ಸುರೈಯಾ ಎಂಬ ಯಶಸ್ವಿ ನಟಿಯೊಂದಿಗಿನ ಅಮರ ಪ್ರೇಮವು ಮತೀಯ ಕಾರಣಗಳಿಂದ ವಿರಹದಲ್ಲಿ ಅಂತ್ಯವಾಗುವುದು ವ್ಯಸನ ತರುತ್ತದೆ. ಆದರೆ ಎಲ್ಲಿಯೂ ಸೋಲೊಪ್ಪದ ಸರದಾರ ದೇವ್ ಮತ್ತೊಬ್ಬ ನಾಯಕ ನಟಿ ಕಲ್ಪನಾ ಕಾರ್ತಿಕ್( ಮೋನಾ) ಜತೆ ಸದ್ದಿಲ್ಲದೇ ದಿಢೀರ್ ವಿವಾಹವಾಗಿ ಚಿತ್ರರಂಗವೇ ಬೆರಗಾಗುವಂತೆ ಮಾಡುತ್ತಾರೆ.
ನಂತರ ಅವರ ಚಿತ್ರರಂಗದ ಯಶಸ್ಸಿನ ಗಾಥೆ ತೆರೆದುಕೊಳ್ಳುತ್ತದೆ...ಅಣ್ಣ ಚೇತನ್ ಮತ್ತು ವಿಜಯ್ ಜತೆ ಸೇರಿ ನವಕೇತನ್ ಸಂಸ್ಥೆಯಡಿ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದು, ಗೆಳೆಯ ಗುರುದತ್ ಜತೆ ಸಹೋದ್ಯೋಗ, ಕಿಶೋರ್ ಕುಮಾರ್ ಜತೆಗಿನ ಇನಿ ದನಿಯ ಬಾಂಧವ್ಯ ಎಲ್ಲವನ್ನೂ ದಾಖಲಿಸಿದ್ದಾರೆ.
ಆದರೆ 60-70 ರ ದಶಕದ ಯಶಸ್ವಿ ಚಿತ್ರಗಳಾದ ಹೇಮಾ ಮಾಲಿನಿ ಜತೆಗಿನ ಜಾನಿ ಮೇರಾ ನಾಮ್, ಜಾನೆಮನ್, ಶರೀಫ಼್ ಬದ್ಮಾಶ್, ಸಾಧನ ಜತೆಗಿನ ಹಮ್ ದೊನೊ, ಅಸ್ಲಿ ನಕ್ಲಿ, ವೈಜಯಂತಿ ಜತೆಗಿನ ಜ್ಯುವೆಲ್ ಥೀಫ಼್, ರಾಖಿ ಜತೆಗಿನ ಹೀರಾ ಪನ್ನಾ, ಜೋಶಿಲಾ ಇತ್ಯಾದಿಯನ್ನು ಮರೆತರೋ ಏನೋ, ಅದೇಕೋ ಸವಿವರವಾಗಿ ನೆನೆಸಿಕೊಂಡಿಲ್ಲ.. ಟಚ್ ಅಂಡ್ ಗೋ ತರಹ ಆಗುತ್ತದೆ.
ಹಲವು ರಾಜಕೀಯ ವ್ಯಕ್ತಿಗಳ ಪರಿಚಯ , ಘಟನೆಗಳನ್ನೂ ಮರೆಯದೇ ಉಲ್ಲೇಖಿಸಿದ್ದಾರೆ.
ಆದರೆ ಜ಼ೀನತ್ ಅಮಾನ್ ಜತೆಗಿನ ಹರೆ ರಾಮ ಹರೆ ಕೃಷ್ಣ ಚಿತ್ರದ ಯಶಸ್ಸು ಮತ್ತೆ ಆಕೆಯ ಜತೆಗೆ ಬೆಳೆದ ರೋಮಾನ್ಸ್ , ನಂತರ ಆಕೆ ರಾಜ್ ಕಪೂರನ ಕ್ಯಾಂಪಿಗೆ ವಲಸೆ ಹೋದಾಗ ಆದ ನಿರಾಸೆ, ತದನಂತರ ಟೀನಾ ಮುನೀಮ್ ರನ್ನು ಪರಿಚಯ ಮಾಡಿಸಿದ್ದು ಎಲ್ಲವನ್ನೂ ಮರೆಯದೇ ನಿಸ್ಸಂಕೋಚವಾಗಿ ಹೇಳಿದ್ದಾರೆ..
ಆದರೆ ವಯಸ್ಸು 80 ಮೀರಿದ ನಂತರ ಬರೆದ ಕಾರಣವೋ ಏನೋ 1990-2000 ದಶಕದ ಸೋಲುಂಡ ಹಲವು ಹೇಳ ಹೆಸರಿಲ್ಲದ ಚಿತ್ರಗಳಾದ ಲವ್ ಅಟ್ ಟೈಮ್ಸ್ ಸ್ಕ್ವೇರ್, ಸೆನ್ಸಾರ್, ಮೈಸೋಲಾ ಬರಸ್ ಕಿ , ಮಿ|| ಪ್ರೈಮ್ ಮಿನಿಸ್ಟರ್, ಚಾರ್ಜ್ ಶೀಟ್ ಮುಂತಾದ ಚಿತ್ರಗಳ ಸವಿವರ ಉಲ್ಲೇಖವಿದೆ!!..
ಅವರ ಸೋಲೊಪ್ಪದ ಸ್ಪಿರಿಟ್ಟಿಗೆ ನನ್ನ ನಮನಗಳು...
ಇನ್ನೂ ಚಿಕ್ಕ ವಯಸ್ಸಿನಲ್ಲಿ ಬರೆಯುತ್ತಾ ಹೋಗಿದ್ದರೆ ಅವರ ಹಲವು ಉತ್ತಮ ಚಿತ್ರಗಳ ವಿವರವೂ ಇರುತಿತ್ತೇನೋ ಅನಿಸಿತು..
ಆದರೂ ಚಿತ್ರರಸಿಕರ ಓದುಗರ ಪಾಲಿಗೆ ಖಂಡಿತಾ ಕೊಂಡು ಓದತಕ್ಕ ಪುಸ್ತಕ...
ನನ್ನ ರೇಟಿಂಗ್: 3/5

Comments

Popular Posts